ಒಪ್ಪಿಸಿದ ಲೆಕ್ಕ: ಸಲ್ಲಿಸಿದ ಸರಕುಗಳ ಬಿಕರಿ ಪಟ್ಟಿಯನ್ನು ಹಿಂದೆಯೇ ಕಳುಹಿಸಲಾಗಿದ್ದು ಅದರಲ್ಲಿ ಸೂಚಿಸಲಾಗಿರುವ ಹಣವನ್ನು ಗ್ರಾಹಕ ಪಾವತಿ ಮಾಡದಿದ್ದಾಗ ಅದರ ವಸೂಲಿಗಾಗಿ ಗ್ರಾಹಕನಿಗೆ ವರ್ತಕ ಬರೆಯುವ ನೆನಪು ಪತ್ರದಲ್ಲಿ ಮತ್ತೊಮ್ಮೆ ಮಾರಾಟದ ವಿವರಗಳನ್ನೆಲ್ಲ ಬರೆಯುವ ಬದಲು ಈ ಒಕ್ಕಣೆಯನ್ನು (ಅಕೌಂಟ್ ರೆಂಡರ್ಡ್‌) ಬಳಸುವುದು ರೂಢಿಯಲ್ಲಿದೆ. ಹಿಂದೆಯೇ ಒಪ್ಪಿಸಿದ ಲೆಕ್ಕಕ್ಕಾಗಿ ನಿಮ್ಮಿಂದ ಬರಬೇಕಾದ ಇಂತಿಷ್ಟು ಹಣ ಇನ್ನೂ ಬಂದಿಲ್ಲ-ಎಂಬುದಾಗಿ ಆತ ಗ್ರಾಹಕನಿಗೆ ಬರೆಯುತ್ತಾನೆ; ಅಥವಾ ಒಪ್ಪಿಸಿದ ಲೆಕ್ಕಕ್ಕಾಗಿ ಬರಬೇಕಾದ ಬಾಕಿ ಇಷ್ಟು ಎಂದು ಯಾದಿಯಲ್ಲಿ ಸೂಚಿಸುತ್ತಾನೆ.

ಯಾವುದೋ ಒಂದು ಕರ್ತವ್ಯ ನಿರ್ವಹಣೆಯ ಸಂಬಂಧವಾಗಿ ತನಗೆ ನೀಡಲಾದ ಹಣ, ವಸೂಲಾದ ಮೊಬಲಗು, ಮಾಡಿದ ಪಾವತಿಗಳು ಮುಂತಾದ ವಿವರಗಳನ್ನೂ ಉಳಿದಿರಬಹುದಾದ ಹಣದ ವಿಲೆ ಹೇಗಾಯಿತೆಂಬುದನ್ನೂ ಸೂಚಿಸಿ ಒಬ್ಬಾತ ತನ್ನನ್ನು ನೇಮಿಸಿದವರಿಗೆ ಅಥವಾ ಸಂಬಂಧಪಟ್ಟವರಿಗೆ ನೀಡಿದ್ದೂ ಒಪ್ಪಿಸಿದ ಲೆಕ್ಕವೇ.			(ಎ.ಕೆ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ